ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ(೧೫ ನವೆಂಬರ್ ೧೯೮೬ -೧೮ ನವೆಂಬರ್ ೨೦೧೭) ಅವರು ಗರುಡ್ ಕಮಾಂಡೋ ಪಡೆಯ ಸದಸ್ಯರಾಗಿದ್ದರು. ಅವರಿಗೆ ಜನವರಿ ೨೦೧೮ ರಲ್ಲಿ, ಮರಣೋತ್ತರವಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಗೌರವವಾದ ಅಶೋಕ ಚಕ್ರವನ್ನು ನೀಡಲಾಯಿತು. ನೆಲದಾಳಿ ಯುದ್ಧಕ್ಕಾಗಿ ಪ್ರಶಸ್ತಿಯನ್ನು ಪಡೆದ ಸುಹಾಸ್ ಬಿಸ್ವಾಸ್ ಮತ್ತು ರಾಕೇಶ್ ಶರ್ಮಾ ನಂತರ ನಿರಾಲಾರವರು ಮೂರನೆಯವರಾಗಿ ಈ ಗೌರವವನ್ನು ಪಡೆದ ಏರ್‌ಮ್ಯಾನ್ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == ನಿರಾಲಾ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ಲಾಡಿ ಗ್ರಾಮದ ನಿವಾಸಿಯಾಗಿದ್ದರು. ನಿರಾಲಾರವರು ನವೆಂಬರ್ ೧೫, ೧೯೮೬ ರಂದು ಯಾದವ್ ಕುಟುಂಬದಲ್ಲಿ ತೇಜ್ ನಾರಾಯಣ ಸಿಂಗ್ ಯಾದವ್ ಮತ್ತು ಮಾಲ್ತಿ ದೇವಿಗೆ ಜನಿಸಿದರು. ಜ್ಯೋತಿ ಪ್ರಕಾಶ್ ನಿರಾಲಾ ಅವರು ಸುಷ್ಮಾನಂದ ಯಾದವ್ ಅವರನ್ನು ೨೦೧೦ ರಲ್ಲಿ ವಿವಾಹವಾದರು ಮತ್ತು ಅವರಿಗೆ ಜಿಜ್ಞಾಸಾ ಕುಮಾರಿ ಎಂಬ ಮಗಳಿದ್ದಾಳೆ. == ಸೇನಾ ಸೇವೆ == ನಿರಾಲಾ ಅವರು ೨೦೦೫ ರಲ್ಲಿ ಭಾರತೀಯ ವಾಯುಪಡೆಯ ಗರುಡ್ ಕಮಾಂಡೋ ದಳಕ್ಕೆ ಸೇರಿದರು. ಅವರ ಘಟಕವನ್ನು ೧೩ ರಾಷ್ಟ್ರೀಯ ರೈಫಲ್ಸ್‌ಗೆ ನಿಯೋಜಿಸಲಾಯಿತು ಮತ್ತು ಆಪರೇಷನ್ ರಕ್ಷಕ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ಮಾಡಲಾಯಿತು. == ಅಶೋಕ ಚಕ್ರ == ತಾಂತ್ರಿಕ ಗುಪ್ತಚರರು ನೀಡಿದ ಸುಳಿವಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಗರುಡ್ ತುಕಡಿ ಮತ್ತು ೧೩ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಆಕ್ರಮಣವನ್ನು ಪ್ರಾರಂಭಿಸಿದವು. ಉಗ್ರರು ಅಡಗಿರುವ ಶಂಕಿತ ಮನೆಯನ್ನು ನಿರಾಲಾರವರ ತುಕಡಿಯು ರಹಸ್ಯವಾಗಿ ಸಮೀಪಿಸಿತು ಮತ್ತು ಬಹು ಹತ್ತಿರದಿಂದ ಹೊಂಚು ಹಾಕಿ ದಾಳಿ ನಡೆಸಿತು. ಹಗುರವಾದ ಮೆಷಿನ್ ಗನ್‌ನೊಂದಿಗೆ ಶಸ್ತ್ರಸಜ್ಜಿತವಾದ ನಿರಾಲಾ ಅಡಗುತಾಣದ ಸಮೀಪದಲ್ಲಿ ಬಚ್ಚಿಟ್ಟುಕೊಂಡರು ಹಾಗೂ ಉಗ್ರರು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಕಡಿತಗೊಳಿಸಿದರು. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆರು ಉಗ್ರರು ಗುಂಡು ಹಾರಿಸಿ ಗ್ರೆನೇಡ್‌ಗಳನ್ನು ಎಸೆದರು. ನಿರಾಲಾರವರು ಪ್ರತಿದಾಳಿ ನಡೆಸಿದರು ಮತ್ತು ಇಬ್ಬರು 'ಎ' ವರ್ಗದ ಉಗ್ರರನ್ನು ಹೊಡೆದು ಉರುಳಿಸಿದರು ಹಾಗೂ ಇನ್ನಿಬ್ಬರು ಗಾಯಗೊಂಡರು. ಗುಂಡಿನ ವಿನಿಮಯದಲ್ಲಿ ನಿರಾಲಾರವರು ಕಿರುಶಸ್ತ್ರಾಸ್ತ್ರಗಳ ಗುಂಡಿನ ದಾಳಿಗೆ ಒಳಗಾಗಿದ್ದರು ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ ಸಹ ಗುಂಡು ಹಾರಿಸುತ್ತಲೇ ಇದ್ದರು. ಎಲ್ಲಾ ಆರು ಉಗ್ರರು ಹತರಾಗಿದ್ದರು. ಈ ದಾಳಿಯಲ್ಲಾದ ಮಾರಣಾಂತಿಕ ಗಾಯಗಳಿಂದಾಗಿ ನಿರಾಲಾ ಮರಣ ಹೊಂದಿದರು. ೨೦೧೮ ರ ಜನವರಿ ೨೬ ರಂದು ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು. ನಿರಾಲಾರವರು ಉಗ್ರಗಾಮಿಗಳ ವಿರುದ್ಧ ಹೋರಾಡುವಲ್ಲಿ ಶೌರ್ಯವನ್ನು ಮತ್ತು ತಮ್ಮ ದೇಶಸೇವೆಯನ್ನು ಪ್ರದರ್ಶಿಸಿದರು. ಲಕ್ಷರ್-ಎ-ತೈಬಾದ ಸ್ಥಳೀಯ ನಾಯಕತ್ವವನ್ನು ತೊಡೆದುಹಾಕಿದ ಕೀರ್ತಿ ಜ್ಯೋತಿ‌ ಪ್ರಕಾಶ್ ನಿರಾಲಾ ಅವರಿಗೆ ಸಲ್ಲುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟ ಉಗ್ರರಲ್ಲಿ ಒಬ್ಬ ೨೦೦೮ ರ ಮುಂಬೈ ದಾಳಿಯ ಪ್ರಮುಖ ಯೋಜಕ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೋದರಳಿಯ. == ಉಲ್ಲೇಖಗಳು ==